ಕೊಲ್ಲಿ ರಾಷ್ಟ್ರದ ಅರಬ್ ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿರುವ ಕರ್ನಾಟಕದ ಪಂಚ ಭಾಷಿಗರ ಸಂಘಟನೆಗಳ ವೈವಿಧ್ಯಮಯ ಕಾರ್ಯಕ್ರಮಗಳ ದೃಶ್ಯವನ್ನು ಸೆರೆಹಿಡಿದು ಮಾಧ್ಯಮಗಳಾದ ಗಲ್ಫ್ ಕನ್ನಡಿಗ, ದಾಯಿಜಿವರ್ಲ್ಡ್, ಊರಿನ ಉದಯವಾಣಿ ಮೂಲಕ ವಿಶ್ವದಾದ್ಯಂತ ವೀಕ್ಷಕರಿಗೆ ವರ್ಣರಂಜಿತವಾಗಿ ಛಾಯ ಚಿತ್ರಗಳ ಮೂಲಕ ವರದಿಯನ್ನು ಮುಟ್ಟಿಸಿದ ಶ್ರೀಯುತ ಸುಜಯ್ ಕುಮಾರ್ ಬೆಂದೂರ್ ಗಲ್ಫಿನಲ್ಲಿ ತಮ್ಮ ಸೇವೆಯಲ್ಲಿ ನಿವೃತಿಯನ್ನು ಪಡೆದು ತಮ್ಮ ತಾಯಿ ನಾಡಿಗೆ ಹಿಂತಿರುಗಿದ್ದಾರೆ.
ಮಂಗಳೂರಿನಿಂದ 1985 ರಲ್ಲಿ ದುಬಾಯಿಗೆ ಬಂದು ಪ್ರಸ್ತುತ ಅಲ್ ದಾನ ಪೆಸಿಲಿಟಿ ಮ್ಯಾನೆಜ್ ಮೆಂಟಿನಲ್ಲಿ ವೃತ್ತಿ. ಪ್ರವೃತ್ತಿಯಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡು, ಜೊತೆಯಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ವೆಬ್ ಸೈಟ್ ಮೂಲಕ ಸುದ್ದಿಚಿತ್ರ ಪ್ರಕಟಿಸುತ್ತಾ ಛಾಯಚಿತ್ರಗ್ರಾಹಕರಾಗಿ ಪರಿಚಿತರು.
ಯು. ಎ. ಇ. ಯಲ್ಲಿ ಕರ್ನಾಟಕ ಪರ ಸಂಘಟನೆಗಳಾದ ಯು. ಎ. ಇ. ತುಳುಕೂಟ, ಅಬುಧಾಬಿ, ದುಬಾಯಿ, ಶಾರ್ಜಾ, ಅಲ್ ಐನ್ ಅಲ್ ಬುರೈಮಿ ಕರ್ನಾಟಕ ಸಂಘಗಳು, ಯು. ಎ. ಇ. ಬಂಟ್ಸ್, ಬಿಲ್ಲವಾಸ್ ದುಬಾಯಿ, ಮೊಗವೀರ್ಸ್ ಯು. ಎ. ಇ., ವಿಶ್ವಕರ್ಮ ಸೇವಾ ಸಮಾಜ ಯು. ಎ. ಇ. , ಮಂಗ್ಳುರ್ ಕೊಂಕಣ್ಸ್, ಎಸ್. ಎಂ. ಕೆ. ಸಿ. , ದಾಯಿಜಿ ರಂಗ್ ಮಂದಿರ್, ದಾಯಿಜಿ ದುಬಾಯಿ, ಬ್ಯಾರಿಸ್ ಕಲ್ಚರಲ್ ಫೋರಂ ಯು.ಎ.ಇ., ಕೆ. ಸಿ. ಒ. ಅಬುಧಾಬಿ, ಜಿ. ಎಸ್. ಬಿ., ಯಕ್ಷಮಿತ್ರರು, ಅಂಬಲತೆರೆವಿಷನ್, ಧ್ವನಿ ಪ್ರತಿಷ್ಠಾನ ಇತ್ಯಾದಿ..... ಸುಮಾರು ನಲವತ್ತರಿಂದ ಐವತ್ತು ವಿವಿಧ ಕರ್ನಾಟಕಪರ ಸಂಘಟನೆಗಳ ಆಶ್ರಯದಲ್ಲಿ ನಡೆಯುವ ಸ್ನೇಹಮಿಲನ, ವಿಹಾರ ಕೂಟ, ಕ್ರೀಡಾಕೂಟ, ನಾಟಕ ಯಕ್ಷಗಾನ, ಅರೋಗ್ಯಶಿಬಿರ, ರಕ್ತದಾನ ಶಿಬಿರ, ವಾರ್ಷಿಕೋತ್ಸವ, ಪೂಜಾ ಕಾರ್ಯಕ್ರಮಗಳು ಇತ್ಯಾದಿ ಹತ್ತು ಹಲವು ಕಾರ್ಯಕ್ರಮಗಳ ದೃಶ್ಯ ಸುಜಯ ಬೆಂದೂರ್ ರವರ ಕ್ಯಾಮೆರಾದಲ್ಲಿ ಸೆರೆಹಿಡಿದು ವೆಬ್ ಸೈಟ್ ನ ಮೂಲಕ ಸುದ್ದಿ ಪ್ರಸಾರವಾಗಿದೆ.
ದಿನಪೂರ್ತಿ ನಡೆಯುವ ಕಾರ್ಯಕ್ರಮಗಳು, ಬಿಸಿಲು ಚಳಿ ಎನ್ನದೆ, ರಾತ್ರಿಯ ಕಾರ್ಯಕ್ರಮ ಮುಗಿದ ನಂತರ ನಿದ್ದೆಗೆಟ್ಟು ಸೆರೆಹಿಡಿದ ಚಿತ್ರಗಳನ್ನು ಅಕರ್ಷಕವಾಗಿ ಸಂಯೋಜಿಸಿ ಬೆಳಗ್ಗೆ, ವೀಕ್ಷಕರು ನೋಡುವಾಗ ಸುದ್ದಿ ಚಿತ್ರಸಹಿತ ಪ್ರಕಟವಾಗಿರುತ್ತದೆ. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರೆ, ತಮ್ಮ ತಮ್ಮ ಚಿತ್ರಗಳು ಪ್ರಕಟವಾಗಿದ್ದರೆ, ನೋಡಿ ಸಂತಸ ಪಡುವ ವೀಕ್ಷಕರು ತಮ್ಮ ಸ್ನೇಹಿತರಿಗೆ ಸುದ್ದಿ ಮುಟ್ಟಿಸಿ ವೆಬ್ ಸೈಟ್ ನೋಡುವಂತೆ ಹೇಳಿ ಸಂಭ್ರಮಿಸುತ್ತಾರೆ. ಯಾವುದೆ ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆ ಸಲ್ಲಿದ ತೃಪ್ತಿ ಸುಜಯ್ ಬೆಂದೂರ್ ರವರ ಒಂದು ನಗುವಿನಲ್ಲಿ ವ್ಯಕ್ತವಾಗುತ್ತದೆ.
ಮಾಧ್ಯಮ ಕ್ಷೇತ್ರದಲ್ಲಿ ಸುಜಯ್ ಬೆಂದೂರ್ ಸಲ್ಲಿಸಿದ ಅತ್ಯುತ್ತಮ ಸೇವೆಯನ್ನು ಶ್ಲಾಘಿಸಿ, ಶ್ರೀ ಬಿ. ಕೆ. ಗಣೇಶ್ ರೈಯವರು ಕರ್ನಾಟಕ ಸಂಘ ಶಾರ್ಜಾದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ 2004 ರಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸನ್ಮಾನಿಸಲಾಗಿದೆ. ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿಯವರ ನೇತ್ರತ್ವದಲ್ಲಿ ನಡೆದ 2009ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಪದ್ಮಶ್ರೀ ಡಾ. ಬಿ. ಆರ್. ಶೆಟ್ಟಿಯವರಿಂದ ಸನ್ಮಾನಿಸಲ್ಪಟ್ಟಿದ್ದಾರೆ. ದುಬಾಯಿ ಕರ್ನಾಟಕ ಸಂಘದ ಆಧ್ಯಕ್ಷರಾದ ಶ್ರೀ ಸಿ. ಆರ್. ಶೆಟ್ಟಿಯವರ ಅವಧಿಯಲ್ಲಿ ನವೆಂಬರ್ 2009 ರಲ್ಲಿ ದುಬಾಯಿಯಲ್ಲಿ ನಡೆದ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಪಾರ್ಲಿಮೆಂಟ್ ಸಂಸದರಾದ, ಹಾಗೂ ಕರ್ನಾಟಕ ಬಿ.ಜೆ.ಪಿ. ರಾಜ್ಯ ಅಧ್ಯಕ್ಷರಾದ ಶ್ರೀ ಸದಾನಂದ ಗೌಡರಿಂದ ಪ್ರಶಸ್ತಿ ಫಲಕ ಸ್ವೀಕಾರ, ಬಿಲ್ಲವಾಸ್ ದುಬಾಯಿ ಮತ್ತು ಎನ್.ಇ. ಸಂಘಟನೆಯ ಅಧ್ಯಕ್ಷರಾದ ಶ್ರೀ ಮೋಹನ್ ಅತ್ತಾವರ್ ರವರ ನೇತ್ರತ್ವದಲ್ಲಿ 12ನೇ ವಾರ್ಷಿಕೋತ್ಸವದ ಅದ್ದೂರಿ ಸಮಾರಂಭದಲ್ಲಿ ಮತ್ತು ಮಂಗ್ಳುರ್ ಕೊಂಕಣ್ಸ್ ಸಂಘಟನೆಯಲ್ಲಿ, ದಾಯಿಜಿವರ್ಲ್ಡ್, ರೇಡಿಯೋ ಸ್ಪೈಸ್ 105.4FMನ ಹೆರ್ಮನ್ ಲೂಯಿಸ್, ಗಲ್ಫ್ ಕನ್ನಡಿಗ, ಶ್ರೀ ವಿಶ್ವಕರ್ಮ ಸೇವಾಸಮಿತಿ ಯು.ಎ.ಇ. ಮತ್ತು ಇನ್ನಿತರ ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನಿಸಿ ಗೌರವಿಸಲ್ಪಟ್ಟಿದ್ದಾರೆ.
ಶ್ರೀಮತಿ ಸ್ಮಿತಾ ಮತ್ತು ಪುತ್ರಿ ಸಂಜನಾ ರೊಂದಿಗೆ ತಾಯಿ ನಾಡಿನಲ್ಲಿ ನೆಲೆಸಲು ಗಲ್ಫ್ ನಿಂದ ನಿರ್ಗಮಿಸುತ್ತಿರುವ ಸಾಮಾಜಿಕ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ಶ್ರೀ ಸುಜಯ ಬೆಂದೂರ್ ರವರಿಗೆ ಯು. ಎ. ಇ. ಯಲ್ಲಿ ನೆಲೆಸಿರುವ ಎಲ್ಲಾ ಕರ್ನಾಟಕ ಪರ ಸಂಘಟನೆಗಳು ಮತ್ತು ಸಮಸ್ತ ಕನ್ನಡಿಗರ ಪರವಾಗಿ ಅಭಿನಂದನೆಗಳು. ತಮ್ಮ ಹಸ್ತಕೌಶಲ್ಯದ ಛಾಯಚಿತ್ರ ಕಲೆ ನಿರಂತರ ವಾಗಿ ಮಾನವಕೋಟಿಗೆ ಲಭ್ಯವಗಲಿ, ವಿಶ್ವದ ವಿಸ್ಮಯ ಕ್ಷಣಗಳು ತಮ್ಮ ಕ್ಯಾಮೆರಾದ ಕಣ್ಣಿಗೆ ಬಿದ್ದು ಸೆರೆಯಾಗಿ ಚಿತ್ರರೂಪ ಪಡೆಯಲಿ ಎಂದು ಶುಭವನ್ನು ಹಾರೈಸುತ್ತೇವೆ.
"ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ"
ಬಿ. ಕೆ. ಗಣೇಶ್ ರೈ
ಪೂರ್ವ ಅಧ್ಯಕ್ಷರು
ಕರ್ನಾಟಕ ಸಂಘ ಶಾರ್ಜಾ
ಅರಬ್ ಸಂಯುಕ್ತ ಸಂಸ್ಥಾನ
ಸೌಜನ್ಯ: ಗಲ್ಫ್ ಕನ್ನಡಿಗ.ಕಾಮ್